ʼಬಿʼ ಖಾತೆಯ 9,736 ಸ್ವತ್ತುಗಳಿಗೆ ʼಎʼ ಖಾತಾ ಪ್ರಮಾಣ ಪತ್ರ: ಮಾಲೀಕರಿಗೆ ನೋಟಿಸ್; ವರದಿ ಸಲ್ಲಿಸಲು ನಿರ್ದೇಶನ
ಅರ್ಜಿದಾರರ ನಿವೇಶನದ ʼಎʼ ಖಾತಾ ಪ್ರಮಾಣ ಪತ್ರ ರದ್ದುಪಡಿಸಿ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಮಾಡಿದ್ದಾರೆ. ಈ ಆದೇಶ ಮಾಡುವ ಮುನ್ನ ವಿವರಣೆ ನೀಡಲು ಅರ್ಜಿದಾರರಿಗೆ ಅವಕಾಶ ನೀಡಿಲ್ಲ. ಇದು ಏಕ ಪಕ್ಷೀಯ ನಿರ್ಧಾರ, ನ್ಯಾಯಸಮ್ಮತವಲ್ಲ ಎಂದು ವಾದ.
ಅರ್ಜಿದಾರರು ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ವಲಯದ ವರದರಾಜಸ್ವಾಮಿ ಬಡಾವಣೆಯ ಸರ್ವೇ ನಂ.1ರಲ್ಲಿ 10/ಎ ಸಂಖ್ಯೆಯ (35*55 ಅಡಿ ವಿಸ್ತೀರ್ಣ) ಎ ಖಾತೆಯ ನಿವೇಶನ ಹೊಂದಿದ್ದಾರೆ. ಆದರೆ, ಆ ನಿವೇಶನವು ಬಿ ಖಾತೆಯದ್ದಾಗಿದ್ದರೂ ಅಕ್ರಮವಾಗಿ ಎ ಖಾತಾ ಪ್ರಮಾಣ ಪತ್ರ ನೀಡಲಾಗಿದೆ ಎಂಬುದಾಗಿ ಸಹಾಯಕ ಕಂದಾಯ ಅಧಿಕಾರಿ 2023ರ ಜೂನ್ 5ರಂದು ನೀಡಿದ ವರದಿಯಲ್ಲಿ ತಿಳಿದುಬಂದಿದೆ. ಹೀಗಾಗಿ, ಎ ಖಾತಾ ಪ್ರಮಾಣ ಪತ್ರವನ್ನು ರದ್ದುಪಡಿಸಿ, ನಿವೇಶನವನ್ನು ಬಿ ಖಾತೆಗೆ ತಾತ್ಕಾಲಿಕವಾಗಿ ಸೇರಿಸಿ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿ ಬ್ಯಾಟಾಯನಪುರ ವಿಭಾಗದ ಜಂಟಿ ಆಯುಕ್ತರ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ 2023ರ ಜುಲೈ 31ರಂದು ಅರ್ಜಿದಾರರಿಗೆ ನೋಟಿಸ್ ನೀಡಿದ್ದರು.
ಜೊತೆಗೆ, ಸ್ವತ್ತಿನ ನೈಜ ದಾಖಲಾತಿಗಳೊಂದಿಗೆ ನೋಟಿಸ್ ತಲುಪಿದ 15 ದಿನಗಳ ಒಳಗೆ ಯಲಹಂಕ ವಲಯದ ಜಂಟಿ ಆಯುಕ್ತರಿಗೆ ಸಲ್ಲಿಸಬೇಕು. ಇಲ್ಲವಾದರೆ ತಮ್ಮ ಹೇಳಿಕೆ ಏನೂ ಇಲ್ಲ ಎಂದು ಭಾವಿಸಿ, ಶಾಶ್ವತವಾಗಿ ಸ್ವತ್ತನ್ನು ಬಿ ಖಾತೆಗೆ ಸೇರಿಸಲಾಗುವುದು ಎಂದು ಕಂದಾಯ ಅಧಿಕಾರಿ ತಿಳಿಸಿದ್ದರು. ಆ ತಿಳಿವಳಿಕೆ ಪತ್ರ ರದ್ದತಿಗೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.